Tuesday, November 7, 2023

ಮರದ ಮರಣದಿಂದ ಆಸೆಯ ಕಿರಣ

 




ಮರಣವಾಗಿದೆ ಇಲ್ಲಿ ಮರದ ಮರಣವಾಗಿದೆ

ಎಂದೋ ಅಗಲಿದ ಆತ್ಮೀಯರ ಸ್ಮರಣವಾಗಿದೆ

ಬಿರುಗಾಳಿ ಮಳೆ ಅಲ್ಲ, ಮಾನವನ ದುರಾಸೆ

ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ

 

ರೆಂಬೆ ಕೊಂಬೆಗಳು ತುಂಡು, ಮಧ್ಯ ಸೀಳು ಭಯಂಕರ

ಬೃಹದ್ ಮರದ ನೋವು ನೋಡಲತೀ ಬೇಸರ

ಬೀಜದಿಂದ ಮರವಾಗಿ ಬಾನೆತ್ತರಕ್ಕೆ ಬೆಳೆದು

ಈಗ ನೆಲಸಮವಾಗಿಹುದು ದುಃಖಕರ

 

ಶತಮಾನಗಳ ಈ ಮರವು ಹಿರಿಯದಾಗಿತ್ತು

ಮಳೆ ಬಿಸಿಲಿನಿಂದ ಕಾಯುವ ಗೋವರ್ಧನ ಗಿರಿ ಅದಾಗಿತ್ತು

ಪುಟ್ಟ ಪ್ರಾಣಿ ಹಲವು ಪಕ್ಷಿಗಳಿಗೆ ಆಸರೆಯಾಗಿದ್ದರೂ

ಸೊಕ್ಕು, ಅಹಂಕಾರಗಳಿಂದ ಬರಿದಾಗಿತ್ತು

 

ಇನ್ನಿಲ್ಲ ತಂಪು ತಂಗಾಳಿ, ಇಲ್ಲಿಲ್ಲ ಆಶ್ರಯ

ಬರಿ ಬಿಸಿಲಿನ ಕಾವು, ಸಂಕಟದ ಭಯ

ನೆರಳಿನ ತಾಣವಾಗಿದ್ದ ಸ್ಥಾನವು

ಈಗ ಆಶಾಹೀನ, ಏಲ್ಲವೂ ಲಯ

 

ಹಾಗೆಂದು ಕೂರಲಾಗದು ಸುಮ್ಮನೆ

ಜೊತೆಯಾಗು ತಂಗಿಯೇ, ಕೈ ನೀಡು ತಮ್ಮನೇ

ಎಲ್ಲರೂ ಜೊತೆಗೂಡಿ ಸಲಹುವ ಇದನ್ನು

ಮರವಲ್ಲ ಇದು ನಮ್ಮ ಪ್ರೀತಿಯ ಅಮ್ಮನೇ

 

ತಡೆಯಿರಿ, ಮರೆಯದಿರಿ ಈ ಮರದ ವಿಷಯ

ಮಾಡುತ್ತಿರಿ ಸುಂದರ ತಣ್ಣೆಳಲಿನ ಆಶಯ

ನೋವಿನಿಂದ ಜೀವ ಪುನಃ ಉಕ್ಕಲಿ

ಬೆಳೆಯಲಿ ಮರಳಿ ಹಸಿರು ದೇವಾಲಯ

 

ನೋವಿನಿಂದ ಜೀವ ಪುನಃ ಉಕ್ಕಲಿ

ಬೆಳೆಯಲಿ ಮರಳಿ ಹಸಿರು ದೇವಾಲಯ

 

No comments: